

Bangalore Development Authority
RNI No. KARBIL/2001/47147 ಕರ್ನಾಟಕ ಸರ್ಕಾರದ ನಡವಳಿಗಳು
ನಗರಾಭಿವೃದ್ಧಿ ಸಚಿವಾಲಯ
RNI No. KARBIL/2001/47147
ಭಾಗ-1 — ಬೆಂಗಳೂರು, ಗುರುವಾರ, ನವೆಂಬರ್ 23, 2017 (ಮಾರ್ಗಶಿರಾ 2, ಶಕ ವರ್ಷ 1939) — ನಂ. 1059
Part-1 — Bengaluru, Thursday, November 23, 2017 (Margashira 2, Shaka Varsha 1939) — No. 1059
ವಿಷಯ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶಕ್ಕೆ ತಯಾರಿಸಿರುವ ಪರಿಷ್ಕೃತ ಮಹಾಯೋಜನೆ-2031ಕ್ಕೆ ಸರ್ಕಾರದ ತಾತ್ಕಾಲಿಕ ಅನುಮೋದನೆ ನೀಡುವ ಬಗ್ಗೆ.
ಓದಲಾಗಿದೆ
- ಸರ್ಕಾರದ ಆದೇಶ ಸಂಖ್ಯೆ: ನಅಇ 540 ಬೆಂಆಸೇ 2004, ದಿನಾಂಕ: 25-06-2007.
- ಆಯುಕ್ತರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇವರ ಪತ್ರ ಸಂಖ್ಯೆ ಬೆಂಅಪ್ರಾ/ನಯೋಸ/8110-2031/312/2017-18, ದಿನಾಂಕ: 12-10-2017.
- ಮಹಾನಗರ ಆಯುಕ್ತರು, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಇವರ ಪತ್ರ ಸಂಖ್ಯೆ BMRDA/BDA/Master Plan/2006-07 (Part-II), ದಿನಾಂಕ: 03-11-2017.
ಪ್ರಸ್ತಾವನೆ
ಮೇಲೆ ಓದಲಾದ ಕ್ರಮಸಂಖ್ಯೆ (1) ರ ಸರ್ಕಾರದ ಆದೇಶದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶಕ್ಕೆ ತಯಾರಿಸಲಾಗಿದ್ದ ಪರಿಷ್ಕೃತ ಮಹಾಯೋಜನೆ-2015ಕ್ಕೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಕಲಂ 13(3) ರಡಿಯಲ್ಲಿ ಸರ್ಕಾರದ ಅಂತಿಮ ಅನುಮೋದನೆ ನೀಡಲಾಗಿತ್ತು.
ಮೇಲೆ ಓದಲಾದ ಕ್ರಮಸಂಖ್ಯೆ (2) ರಲ್ಲಿನ ಪತ್ರದಲ್ಲಿ ಆಯುಕ್ತರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬೆಂಗಳೂರು ನಗರ ಸ್ಥಳೀಯ ಯೋಜನಾ ಪ್ರದೇಶಕ್ಕೆ ತಯಾರಿಸಿರುವ ಪರಿಷ್ಕೃತ ಮಹಾಯೋಜನೆ-2031ಕ್ಕೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಕಲಂ 13(1) ರಡಿಯಲ್ಲಿ ಸರ್ಕಾರದ ತಾತ್ಕಾಲಿಕ ಅನುಮೋದನೆಗಾಗಿ ಪ್ರಸ್ತಾವನೆಯನ್ನು ಮಹಾನಗರ ಆಯುಕ್ತರು, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಇವರಿಗೆ ಸಲ್ಲಿಸಿರುತ್ತಾರೆ.
ಮೇಲೆ ಓದಲಾದ ಕ್ರಮಸಂಖ್ಯೆ (3) ರಲ್ಲಿನ ಪತ್ರದಲ್ಲಿ ಮಹಾನಗರ ಆಯುಕ್ತರು, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಇವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ತಯಾರಿಸಿ ಸಲ್ಲಿಸಿರುವ ಬೆಂಗಳೂರು ನಗರದ ಸ್ಥಳೀಯ ಯೋಜನಾ ಪ್ರದೇಶದ ತಾತ್ಕಾಲಿಕ “ಪರಿಷ್ಕೃತ ಮಹಾಯೋಜನೆ-2031”ನ್ನು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಕಲಂ 13(1) ರಡಿಯಲ್ಲಿ ಸರ್ಕಾರದ ತಾತ್ಕಾಲಿಕ ಅನುಮೋದನೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಮಹಾಯೋಜನೆಯನ್ನು ತಯಾರಿಸುವ ಉದ್ದೇಶದ ಬಗ್ಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಕಲಂ 10(1) ರಡಿಯಲ್ಲಿ ದಿನಾಂಕ: 07-05-2012ರ ರಾಜ್ಯ ಪತ್ರದಲ್ಲಿ ಹಾಗೂ ದಿನಾಂಕ: 08-05-2012ರ ದಿನಪತ್ರಿಕೆಯಲ್ಲಿ ಪ್ರಕಟಿಸಿ, ಕಾನೂನಿನನ್ವಯ ಎಲ್ಲಾ ಪ್ರಕ್ರಿಯೆಗಳನ್ನು ಕೈಗೊಂಡು ತಾತ್ಕಾಲಿಕ ಮಹಾಯೋಜನೆಯನ್ನು ತಯಾರಿಸಿರುತ್ತದೆ.
ಸದರಿ ತಾತ್ಕಾಲಿಕ ಮಹಾಯೋಜನೆಯಲ್ಲಿ 2031ನೇ ಇಸವಿಗೆ ಆಗಬಹುದಾದ ಸಂಭವನೀಯ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಜನಸಾಂದ್ರತೆಗನುಗುಣವಾಗಿ, 2015ನೇ ಮಹಾಯೋಜನೆಗಿಂತ ಕೇವಲ 80 ಚದರ ಕಿಲೋ ಮೀಟರ್ ಪ್ರದೇಶವನ್ನು ಮಾತ್ರ ಹೆಚ್ಚುವರಿ ನಗರೀಕರಣ ಪ್ರದೇಶವನ್ನಾಗಿ ಪ್ರಸ್ತಾಪಿಸಲಾಗಿದೆ.
ನಗರೀಕರಣಕ್ಕೆ ಅವಶ್ಯಕವಾಗುವ ವ್ಯವಸ್ಥೆಗಳಾದ:
- ಸಾರಿಗೆ ಮತ್ತು ಸಂಚಾರ ವ್ಯವಸ್ಥೆ
- ಸಂಪರ್ಕ ರಸ್ತೆಗಳು
- ವಸತಿ ಸೌಲಭ್ಯದ ಬೇಡಿಕೆ
- ನೀರು ಸರಬರಾಜು ಬೇಡಿಕೆ
- ಘನ ತ್ಯಾಜ್ಯ ನಿರ್ವಹಣೆಗೆ ಬೇಕಾದ ಜಮೀನು
- ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಬೇಡಿಕೆಗಳು
- ದೊಡ್ಡ ಉದ್ಯಾನವನಗಳು (Big Park)
- ವಲಯ ನಿಯಮಾವಳಿಗಳು
ಮುಂತಾದ ಪ್ರಮುಖ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಪರಿಷ್ಕೃತ ಮಹಾಯೋಜನೆ-2031ನ್ನು ತಯಾರಿಸಿರುವುದಾಗಿ ಪ್ರಸ್ತಾವನೆಯಲ್ಲಿ ವಿವರಿಸಲಾಗಿದೆ.
ಸದರಿ ಪ್ರಸ್ತಾವನೆಯನ್ನು ಸರ್ಕಾರವು ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ
ಸರ್ಕಾರದ ಆದೇಶ ಸಂಖ್ಯೆ: ನಅಇ 516 ಬೆಂಆಸೇ 2017, ಬೆಂಗಳೂರು, ದಿನಾಂಕ: 22-11-2017
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ತಯಾರಿಸಿ ಸಲ್ಲಿಸಿರುವ ಬೆಂಗಳೂರು ನಗರದ ಸ್ಥಳೀಯ ಯೋಜನಾ ಪ್ರದೇಶದ ಪರಿಷ್ಕೃತ ಮಹಾಯೋಜನೆ-2031ಕ್ಕೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಕಲಂ 13(1) ರಡಿಯಲ್ಲಿ ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಸರ್ಕಾರದ ತಾತ್ಕಾಲಿಕ ಅನುಮೋದನೆ ನೀಡಲಾಗಿದೆ.
-
ಪ್ರಸ್ತಾಪಿತ ತಾತ್ಕಾಲಿಕ ಮಹಾಯೋಜನೆಯನ್ನು ಸಾರ್ವಜನಿಕವಾಗಿ ಪ್ರಕಟಿಸಿ 60 ದಿನಗಳ ಕಾಲಾವಕಾಶ ನೀಡಿ, ಮಹಾಯೋಜನೆ ಕುರಿತಂತೆ ಸಾರ್ವಜನಿಕರಿಂದ ಸಲಹೆ ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸುವುದು.
-
ಇದುವರೆಗೆ ಸರ್ಕಾರ ಅನುಮೋದಿಸಿದ ವಲಯ ಬದಲಾವಣೆ ಮತ್ತು ಪ್ರಾಧಿಕಾರವು ಕೈಗೊಂಡಿರುವ ಬದಲಾವಣೆಗಳನ್ನು ಪರಿಗಣಿಸಿ, ಸಂಬಂಧಿಸಿದ ಮಾಹಿತಿಗಳನ್ನು ಮಹಾಯೋಜನೆಯಲ್ಲಿ ಸರಿಯಾಗಿ ಅಳವಡಿಸಬೇಕು.
-
ಪರಿಸರ ಸೂಕ್ಷ್ಮ ಪ್ರದೇಶಗಳಾದ ಕಣಿವೆಗಳು, ನದಿತೊರೆ ಪಾತ್ರಗಳು, ಕೆರೆಯ ಅಂಗಳಗಳು ಮುಂತಾದವುಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಸರಿಯಾಗಿ ಅಳವಡಿಸಬೇಕು.
-
ಸಂಬಂಧಿಸಿದ ಕ್ಯಾಡಸ್ಟ್ರಿಯಲ್ ಮಾಹಿತಿಗಳನ್ನು ಸರಿಯಾಗಿ ಅಳವಡಿಸಿದ ಬಗ್ಗೆ ಖಚಿತಪಡಿಸಿಕೊಳ್ಳಬೇಕು.
-
ಹಾಲಿ ಅಭಿವೃದ್ಧಿಗೊಂಡ ಮತ್ತು ಅನುಮೋದಿತ ವಿನ್ಯಾಸಗಳ ಉದ್ಯಾನವನ ಮತ್ತು ನಾಗರಿಕ ಸೌಲಭ್ಯ ನಿವೇಶನಗಳನ್ನು ಪ್ರಸ್ತಾವಿತ ಭೂ ಉಪಯೋಗ ನಕ್ಷೆಗಳಲ್ಲಿ ತಪ್ಪದೇ ಅಳವಡಿಸಿಕೊಳ್ಳತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಎನ್. ನರಸಿಂಹಮೂರ್ತಿ ಸರ್ಕಾರದ ಉಪ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆ
BANGALOE AUTHORITY ★